1 ಮತಕ್ಕೆ ರಾಷ್ಟ್ರಮಟ್ಟದಲ್ಲಿ ಸುದ್ದಿ, ಆದ್ರೆ ಬಸ್ ಸ್ಟ್ಯಾಂಡ್ ಮಾತ್ರ ಇಲ್ಲ!
ವರದಿ:ಗುರುರಾಜ್ ತೆಳ್ಳನೂರು
ಚಾಮರಾಜನಗರ: ತಾಲ್ಲೂಕಿನ ಸಂತೇಮರಹಳ್ಳಿಯು 1962 ರಲ್ಲಿ ಸಂತೇಮರಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರವಾಗಿ ಉದಯವಾಯಿತು. ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಈ ಕ್ಷೇತ್ರ 2008 ರಲ್ಲಿ ಕೇವಲ ಒಂದು ಮತದ ಅಂತರದ ಫಲಿತಾಂಶ ನೀಡಿ ಇಡೀ ದೇಶವೇ ತಿರುಗಿ ನೋಡುವ ಹಾಗೆ ಮಾಡಿತ್ತು. ಅಷ್ಟು ಮಹತ್ವದ ಕ್ಷೇತ್ರ ಇದಾಗಿದೆ.
1962 ರಿಂದ 2026 ರವರೆಗೆ ಹಲವಾರು ಘಟಾನುಘಟಿ ಶಾಸಕರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ಆದರೆ ಅಭಿವೃದ್ಧಿಯ ವಿಚಾರಕ್ಕೆ ಬಂದಾಗ ಮಾತ್ರ ಈ ಕ್ಷೇತ್ರ ಇಂದಿಗೂ ಹಿಂದೆಯೇ ಉಳಿದಿದೆ ಎಂಬುದು ಸ್ಥಳೀಯರ ಆರೋಪ.
ಹೌದು ದಶಕಗಳ ಇತಿಹಾಸ ಹೊಂದಿರುವ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇಂದಿಗೂ ಸುಸಜ್ಜಿತ ಬಸ್ ನಿಲ್ದಾಣವೇ ಇಲ್ಲ. ಇದು ಶಾಪವೋ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷವೋ ಎಂದರೆ ತಪ್ಪಾಗಲಾರದು.
ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಇಲ್ಲಿಂದ ಚಾಮರಾಜನಗರ, ಮೈಸೂರು, ಬೆಂಗಳೂರು ಮತ್ತು ತಮಿಳುನಾಡಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. "ಸಂತೇಮರಹಳ್ಳಿ ಸರ್ಕಲ್" ಎಂದೇ ಪ್ರಖ್ಯಾತಿಯಾಗಿರುವ ಈ ಸ್ಥಳದಲ್ಲಿ ಬಿಸಿಲು, ಮಳೆ, ಚಳಿ, ಹಳ್ಳ ಕೊಳ್ಳ ಎನ್ನದೆ ಜನರು ರಸ್ತೆ ಬದಿಯಲ್ಲಿಯೇ ನಿಂತು ಬಸ್ ಗಾಗಿ ಕಾಯುವ ದುಸ್ಥಿತಿ ಇದೆ. ಮಹಿಳೆಯರು, ಮಕ್ಕಳು, ವೃದ್ಧರು ಪರದಾಡುವ ಪರಿಸ್ಥಿತಿ ಬಂದಿದೆ.
ಸಂತೇಮರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 33 ಎಕರೆಗೂ ಹೆಚ್ಚು ಸರ್ಕಾರಿ ಜಾಗ ಖಾಲಿ ಇದೆ. ಬಸ್ ನಿಲ್ದಾಣ ಕಟ್ಟಲು ಸ್ಥಳದ ಕೊರತೆಯೂ ಇಲ್ಲ. ಆದರೆ ಕಡತ ಮಾತ್ರ ವರ್ಷದಿಂದ ವರ್ಷಕ್ಕೆ ದೂಳು ತಿನ್ನುತ್ತಿದೆ.
ಚುನಾಯಿತ ಪ್ರತಿನಿಧಿಗಳು ಪ್ರತಿ ಚುನಾವಣೆಯಲ್ಲೂ ಬಸ್ ನಿಲ್ದಾಣ ಕಟ್ಟುತ್ತೇವೆ, ತಾಲೂಕು ಮಾಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ ಗೆದ್ದ ನಂತರ ಆ ಭರವಸೆಗಳು ಗಾಳಿಗೆ ತೇಲಿ ಹೋಗುತ್ತವೆ.
2008 ರಲ್ಲಿ ಕೇವಲ ಒಂದು ಮತದಿಂದ ಸೋತಿದ್ದ ಎ.ಆರ್. ಕೃಷ್ಣಮೂರ್ತಿ ಅವರು ಕಳೆದ ಚುನಾವಣೆಯಲ್ಲಿ ಗೆದ್ದು ಕ್ಷೇತ್ರದ ಶಾಸಕರಾಗಿದ್ದಾರೆ. ಒಂದು ಕಾಲದಲ್ಲಿ ಈ ಕ್ಷೇತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಗುರುತು ತಂದುಕೊಟ್ಟ ಅದೇ ನಾಯಕ ಅಧಿಕಾರ ಹೊಂದಿದ್ದಾರೆ. ಇವಾಗಲೂ ಸಹ ಮನಸ್ಸು ಮಾಡಿದರೆ ಅವರ ಅಧಿಕಾರಾವಧಿಯಲ್ಲಿ ಬಸ್ ನಿಲ್ದಾಣ ಮತ್ತು ತಾಲ್ಲೂಕು ಆಗುವ ಕನಸು ನನಸಾಗಬಹುದು ಎಂಬುದು ಸ್ಥಳೀಯರ ನಂಬಿಕೆ ಮತ್ತು ಆಶಯವಾಗಿದೆ. ಆದರೆ ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರುವವರೆಗೆ ಮಾತ್ರ ಸೀಮಿತವಾಗುತ್ತದೆಯೇ ಅಥವಾ ಈಡೇರುತ್ತದೆಯೋ ಎಂಬ ಯಕ್ಷ ಪ್ರಶ್ನೆ ಈಗ ಜನರಲ್ಲಿ ಮನಸಲ್ಲಿ ಕಾಡುತ್ತಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಅವರು, "ಒಂದು ಮತದ ಕ್ಷೇತ್ರ ಎಂದು ಹೆಸರು ಮಾಡಿದ ನಮ್ಮ ಸಂತೇಮರಹಳ್ಳಿಗೆ ಇಂದಿಗೂ ಮೂಲಭೂತ ಸೌಲಭ್ಯವೇ ಇಲ್ಲ. ಶಾಸಕರು ನಿದ್ರೆಯಿಂದ ಎಚ್ಚೆತ್ತುಕೊಂಡು ತಕ್ಷಣ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು. ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಬೇಕಾಗುತ್ತದೆ" ಎಂದು ಆಗ್ರಹಿಸಿದರು.
ಜನರ ತೆರಿಗೆಯ ಹಣದಿಂದ ನಡೆಯುವ ಸರ್ಕಾರ, ಜನರ ಮೂಲಭೂತ ಅಗತ್ಯಗಳನ್ನೇ ಪೂರೈಸದೇ ಇದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇನಿದೆ ಎಂಬ ಪ್ರಶ್ನೆ ಈಗ ಸಂತೇಮರಹಳ್ಳಿ ಹೋಬಳಿಗೆ ಬರುವ ಗ್ರಾಮದ ಮತದಾರರ ಬಾಯಲ್ಲಿ ಕೇಳಿ ಬರುತ್ತಿದೆ.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ