ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ
ಕರ್ನಾಟಕದ ದಕ್ಷಿಣ ಭಾಗದ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ರೈತರ ಜಮೀನು, ನೀರಾವರಿ, ಬೆಳೆ ಪರಿಹಾರ ಮತ್ತು ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಸರ್ಕಾರದ ವಿರುದ್ಧ ನಿರಂತರ ಜನಪರ ಹೋರಾಟ ನಡೆಸುತ್ತಿರುವ ಹೊನ್ನೂರು ಗ್ರಾಮದ ಪ್ರಸಿದ್ಧ ರೈತ ಹೋರಾಟಗಾರ ಪ್ರಕಾಶ್ ಅವರಿಗೆ ಈ ಬಾರಿಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಜಿಲ್ಲೆಯ ಪ್ರಮುಖ ಯುವ ರೈತ ಮುಖಂಡರಾದ ಚಿಕ್ಕಬಸಪ್ಪ ಹಾಗೂ ಪಣೀಶ್ ಕುಮಾರ್ ಕುದೇರು ಅವರು ಬಲವಾದ ಆಗ್ರಹ ಮಾಡಿದ್ದಾರೆ. G1 News ಜೊತೆ ಮಾತನಾಡಿದ ಉಮ್ಮತ್ತೂರಿನ ರೈತ ಯುವ ಮುಖಂಡ ಚಿಕ್ಕಬಸಪ್ಪ, ನಮ್ಮ ಪ್ರಕಾಶ್ ಅಣ್ಣ ದಿನ ರಾತ್ರಿ ಅಂತ ನೋಡದೆ ರೈತರಿಗಾಗಿ ಹೋರಾಟ ನಡೆಸುತ್ತಾರೆ. ಅವರಿಗೆ ಬಿಗ್ ಬಾಸ್ ನಲ್ಲಿ ಅವರಿಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಮಣ್ಣಿನ ಮಗನಿಗೆ ಬಿಗ್ ಬಾಸ್ ವೇದಿಕೆ ಕೊಡಿ, ಒಂದು ಕೋಟಿ ಜನಕ್ಕೆ ರೈತರ ಕಷ್ಟ ತಿಳಿಯಲಿ ಎಂದು ಚಾಮರಾಜನಗರ, ಮೈಸೂರು ಭಾಗದ ಸಾವಿರಾರು ಯುವಕರು ಮತ್ತು ರೈತರು ಪೋಸ್ಟ್ ಹಾಕಿ ಬೆಂಬಲ ಸೂಚಿಸುತ್ತಿದ್ದಾರೆ. ಹೊನ್ನೂರು ಪ್ರಕಾಶ್ ಅವರು ಕಳೆದ ಮೂವತ್ತು ವರ್ಷಗಳಿಂದ ರೈತರ ಭೂಮಿ, ನೀರು ಮತ್ತು ಬೆಳೆಗಳಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿದ್ದಾರೆ. ಬೆಳೆ ನಷ್ಟ ಪರಿಹಾರ, ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ಅನೇಕ ಪ್ರತಿಭಟನೆಗಳನ್ನು ಮುನ್ನಡೆಸಿದ್ದಾರೆ. ...