A V S S ಕಾನೂನು ಕಾಲೇಜಿನಲ್ಲಿ ಪ್ರಥಮ ವಾರ್ಷಿಕ ದಿನಾಚರಣೆ.
ವರದಿ: G1 News
A V S S ಕಾನೂನು ಕಾಲೇಜಿನಲ್ಲಿ ಪ್ರಥಮ ವಾರ್ಷಿಕ ದಿನಾಚರಣೆ.ಮೈಸೂರು : ಮೈಸೂರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಲಾ ಕಾನೂನು ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ದಿನಾಚರಣೆ ಮತ್ತು ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮೈಸೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀಮತಿ ರೂಪ ರವರು ಮಾತನಾಡಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ, ಆರೋಗ್ಯಕರ ಮತ್ತು ಜವಾಬ್ದಾರಿಯುತ ಜೀವನದತ್ತ ಎಲ್ಲರನ್ನು ಪ್ರೇರೇಪಿಸುವುದಾಗಿದೆ.
ಮಾದಕ ದ್ರವ್ಯ ಸೇವನೆಯು ವ್ಯಕ್ತಿಯ ಆರೋಗ್ಯ, ಕುಟುಂಬ, ಶಿಕ್ಷಣ, ಉದ್ಯೋಗ ಹಾಗೂ ಸಮಾಜದ ಶಾಂತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕ್ಷಣಿಕ ಸುಖಕ್ಕಾಗಿ ಆರಂಭವಾಗುವ ಈ ದುಶ್ಚಟವು ಅನೇಕ ಕುಟುಂಬಗಳನ್ನು ದುಃಖ ದತ್ತ ತಳ್ಳುತ್ತದೆ. ಯುವಜನತೆ ತಮ್ಮ ಅಮೂಲ್ಯ ಜೀವನವನ್ನು ವ್ಯಸನಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವುದು ಅತ್ಯಂತ ಅಗತ್ಯ.
ಕಾನೂನು ಮಾದಕ ದ್ರವ್ಯಗಳ ಅಕ್ರಮ ಸಾಗಣೆ, ಮಾರಾಟ ಮತ್ತು ಬಳಕೆಯ ವಿರುದ್ಧ ಕಠಿಣ ಕ್ರಮಗಳನ್ನು ಒದಗಿಸಿದೆ. ಆದರೆ ಕಾನೂನಿಗಿಂತಲೂ ಮುಖ್ಯವಾದದ್ದು ಜಾಗೃತಿ, ಉತ್ತಮ ಸಂಸ್ಕಾರ ಮತ್ತು ಆತ್ಮಸಂಯಮ. ಪ್ರತಿಯೊಬ್ಬ ನಾಗರಿಕನೂ ಸಮಾಜವನ್ನು ವ್ಯಸನ ಮುಕ್ತವಾಗಿಸಲು ತನ್ನದೇ ಆದ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು.
ವಿದ್ಯಾರ್ಥಿಗಳೇ, ನಿಮ್ಮ ಕನಸುಗಳು ಮತ್ತು ಗುರಿಗಳೇ ನಿಮ್ಮ ಜೀವನದ ನಿಜವಾದ ಶಕ್ತಿ. ಕೆಟ್ಟ ಸ್ನೇಹ, ತಪ್ಪು ಅಭ್ಯಾಸಗಳು ಮತ್ತು ವ್ಯಸನಗಳಿಂದ ದೂರವಿದ್ದು ಶಿಕ್ಷಣ, ಕ್ರೀಡೆ, ಕಲೆ ಹಾಗೂ ಸಾಮಾಜಿಕ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮ ಯಶಸ್ಸೇ ನಿಮ್ಮ ಕುಟುಂಬದ ಹೆಮ್ಮೆ ಹಾಗೂ ರಾಷ್ಟ್ರದ ಶಕ್ತಿಯಾಗುತ್ತದೆ.
ಪೋಷಕರು ಮತ್ತು ಶಿಕ್ಷಕರು ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿ, ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು, ಸರಿಯಾದ ಮಾರ್ಗದರ್ಶನ ನೀಡಬೇಕು. ಸಮಾಜದ ಪ್ರತಿಯೊಬ್ಬ ಸದಸ್ಯರೂ ವ್ಯಸನದ ವಿರುದ್ಧ ಜಾಗೃತಿ ಮೂಡಿಸಿದಾಗ ಮಾತ್ರ ಆರೋಗ್ಯಕರ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸಲು ಸಾಧ್ಯ.
ಈ ಸಂದರ್ಭದಲ್ಲಿ, ಎಲ್ಲರೂ ಮಾದಕ ದ್ರವ್ಯಗಳಿಂದ ದೂರವಿದ್ದು, ಇತರರನ್ನೂ ವ್ಯಸನಮುಕ್ತ ಜೀವನದತ್ತ ಪ್ರೇರೇಪಿಸುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ವಿ.ಎಸ್.ಎಸ್ ಹಾಗೂ ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಲಾ ಸಂಸ್ಥಾಪಕರು ಅಧ್ಯಕ್ಷರಾದ ತುಂಬಲ ರಾಮಣ್ಣ ರವರು ಮಾತನಾಡಿ ಕಾನೂನು ಶಿಕ್ಷಣವು ಕೇವಲ ವೃತ್ತಿ ಅವಕಾಶಗಳನ್ನು ನೀಡುವುದಲ್ಲ, ಬದಲಿಗೆ ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಸಂವಿಧಾನದ ಮೌಲ್ಯಗಳನ್ನು ಬಲಪಡಿಸುವ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಉತ್ತಮ ಕಾನೂನು ಜ್ಞಾನವನ್ನು ಪಡೆದು ಸಮಾಜದ ದುರ್ಬಲ ವರ್ಗಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಿ ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ನಡೆಸುವಂತೆ ಕರೆ ನೀಡಿದರು.
ಕಾಲೇಜು ಸ್ಥಾಪನೆಯಾದ ಕೇವಲ ಒಂದು ವರ್ಷದಲ್ಲೇ ಶೈಕ್ಷಣಿಕ, ಸಾಮಾಜಿಕ ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮಗಳ ಮೂಲಕ ಉತ್ತಮ ಹೆಸರು ಗಳಿಸಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಕಾಲೇಜು ಇನ್ನಷ್ಟು ಶೈಕ್ಷಣಿಕ ಸಾಧನೆಗಳನ್ನು ಮಾಡಿ ಮಾದರಿ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮೈಸೂರು ವಕೀಲರ ಸಂಘದ ಅಧ್ಯಕ್ಷರಾದ ಲೋಕೇಶ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಗುರುಸ್ವಾಮಿ , ಎ.ವಿ.ಎಸ್.ಎಸ್. ನಿರ್ದೇಶಕರಾದ ಶ್ರೀಕಂಠ, ಗೋವಿಂದರಾಜು ಹಾಗೂ ಕಾಲೇಜು ಕಾನೂನು ಸೇವಾ ಕೇಂದ್ರ ಸಂಯೋಜಕ ಮಹದೇವಮೂರ್ತಿ ಟಿ ಎಂ, ರೆಡ್ ಕ್ರಾಸ್ ಸಂಯೋಜಕಿ ಬಿ ಎಂ ಚೈತ್ರ ಹಾಗೂ ಕಾಲೇಜು ಬೋಧಕ-ಬೋಧಕೇತರ ವರ್ಗ ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ