ಮೊಬೈಲ್ ಬಳಕೆ ಮಿತಿಗೊಳಿಸಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ರಾಜೇಶ್ ನಾಯಕ
ವರದಿ:ಮಣಿಕಂಠ ನಾಯಕ್ ಗೂಳಿಪುರ
ಯಳಂದೂರು:ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರಾದೇ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ "ಮೊಬೈಲ್ ಬಿಡಿ ಪುಸ್ತಕ ಹಿಡಿ" ಸಂವಾದ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀ ಈಶ್ವರ್ ನೆರವೇರಿಸಿದರು. ನಂತರ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಹಾಗೂ ರಾದೇ ಪ್ರತಿಷ್ಠಾನ ಸಂಸ್ಥಾಪಕ ರಾಜೇಶ್ ನಾಯಕ್ ಜಿ.ಆರ್. ಮೊಬೈಲ್ ದುಷ್ಪರಿಣಾಮಗಳು ಹಾಗೂ ಪುಸ್ತಕ ಓದಿನ ಮಹತ್ವದ ಕುರಿತು ಸಂವಾದದ ಮೂಲಕ ಮಾಹಿತಿ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೈಲಕುಮಾರ್ ಎಂ. ರಾದೇ ಪ್ರತಿಷ್ಠಾನ ವತಿಯಿಂದ 50 ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ನ್ಯಾಯಧೀಶರಿಂದ ವಿತರಿಸಿದರು. ನಂತರ ಮಾತನಾಡಿ ಪುಸ್ತಕ ಓದುವುದು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅತ್ಯುತ್ತಮ ಸಾಧನವಾಗಿದೆ. ಪುಸ್ತಕಗಳಿಂದ ಜ್ಞಾನ, ಸಾಮಾನ್ಯ ಅರಿವು, ಏಕಾಗ್ರತೆ, ನೆನಪಿನ ಶಕ್ತಿ ಹಾಗೂ ಭಾಷಾ ಕೌಶಲ್ಯ ವೃದ್ಧಿಯಾಗುತ್ತದೆ. ಉತ್ತಮ ಆಲೋಚನೆ, ನೈತಿಕ ಮೌಲ್ಯಗಳು ಮತ್ತು ಸೃಜನಶೀಲತೆ ಬೆಳೆಯುವುದರ ಜೊತೆಗೆ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು, ವ್ಯಕ್ತಿತ್ವ ವಿಕಸನಗೊಳ್ಳಲು ಹಾಗೂ ಜೀವನದಲ್ಲಿ ಯಶಸ್ಸು ಸಾಧಿಸಲು ಪುಸ್ತಕಗಳು ಅತ್ಯುತ್ತಮ ಸ್ನೇಹಿತ ಮತ್ತು ಮಾರ್ಗದರ್ಶಿಯಾಗಿವೆ.
ವೈದ್ಯರಾದ ಡಾ. ಶ್ರೀಧರ್ ಮಾತನಾಡಿ ಪುಸ್ತಕ ಓದುವುದು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಅಭ್ಯಾಸವಾಗಿದೆ. ಪ್ರತಿದಿನ ಸ್ವಲ್ಪ ಸಮಯ ಪುಸ್ತಕ ಓದುವುದರಿಂದ ಒತ್ತಡ, ಆತಂಕ ಮತ್ತು ಖಿನ್ನತೆ ಕಡಿಮೆಯಾಗುತ್ತದೆ. ಏಕಾಗ್ರತೆ, ನೆನಪಿನ ಶಕ್ತಿ ಹಾಗೂ ಚಿಂತನಾ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ಮೆದುಳು ಚುರುಕಾಗಿ ಕಾರ್ಯನಿರ್ವಹಿಸುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ಕಣ್ಣಿನ ಆಯಾಸ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಪುಸ್ತಕ ಓದುವ ಅಭ್ಯಾಸ ಸಹಕಾರಿಯಾಗಿದೆ. ಆದ್ದರಿಂದ ಮಕ್ಕಳು ಪ್ರತಿದಿನ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು," ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆರ್. ನಂಜುಂಡಯ್ಯ ಮಾತನಾಡಿ ಪುಸ್ತಕಗಳು ನಮ್ಮ ಜೀವನದ ನಿಜವಾದ ಗೆಳೆಯರು. ಮೊಬೈಲ್ ಬಳಕೆಯನ್ನು ಅಗತ್ಯಕ್ಕೆ ಮಾತ್ರ ಸೀಮಿತಗೊಳಿಸಿ, ಶಾಲೆಯಲ್ಲಿ ಓದಿನ ಸಂಸ್ಕೃತಿಯನ್ನು ಬೆಳೆಸಲು ಎಲ್ಲರೂ ಕೈಜೋಡಿಸಬೇಕು. 'ಮೊಬೈಲ್ ಬಿಡಿ, ಪುಸ್ತಕ ಹಿಡಿ' ಎಂಬ ಸಂದೇಶವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು," ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗೇಂದ್ರ, ಆರೋಗ್ಯ ಇಲಾಖೆ ಮೋಹನ್ ಕುಮಾರ್,ಸಿಡಿಪಿಓ ಇಲಾಖೆಯ ತ್ರಿವೇಣಿ , ಎಸ್ ಡಿ ಎಂ ಸಿ ಅಧ್ಯಕ್ಷರು ಜೈಗುರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ