ಯಳಂದೂರಿನಲ್ಲಿ ಅದ್ಧೂರಿಯಾಗಿ ನಡೆದ ಬಸವ ಜಯಂತಿ ಮಹೋತ್ಸವ


ಯಳಂದೂರಿನಲ್ಲಿ ಅದ್ಧೂರಿಯಾಗಿ ನಡೆದ  ಬಸವ ಜಯಂತಿ ಮಹೋತ್ಸವ

ಯಳಂದೂರು, ಜು. 25: ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು, ಜಗಜ್ಯೋತಿ ಶ್ರೀ ಬಸವೇಶ್ವರರ 893ನೇ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬಸವ ಜಯಂತಿ ಆಚರಣಾ ಸಮಿತಿ ಹಾಗೂ ಬಸವ ಬಳಗಗಳ ಒಕ್ಕೂಟ, ಯಳಂದೂರು ತಾಲ್ಲೂಕು ವತಿಯಿಂದ ಶನಿವಾರ ಆಯೋಜಿಸಿದ್ದ ಬಸವ ಜಯಂತಿ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬಸವ ಅನುಯಾಯಿಗಳು, ಹಳ್ಳಿಕಾರ್ ಹೋರಿಗಳು, ಎತ್ತಿನಗಾಡಿಗಳು, ಟ್ರ್ಯಾಕ್ಟರ್‌ಗಳು ಹಾಗೂ ಆಟೋಗಳಲ್ಲಿ ಶ್ರೀ ಬಸವೇಶ್ವರರು ಮತ್ತು ಶರಣರ ಭಾವಚಿತ್ರಗಳನ್ನು ಪುಷ್ಪಾಲಂಕೃತ ಪಲ್ಲಕ್ಕಿಗಳಲ್ಲಿ ತಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ನಂದಿ ಧ್ವಜ ಹಾಗೂ ಶ್ರೀ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. 

ಬಳಿಕ ಆಶೀರ್ವಚನ ನೀಡಿ, ಬಸವಣ್ಣನವರು ಸಾರಿದ ಸಮಾನತೆ, ಸೌಹಾರ್ದತೆ ಮತ್ತು ಕಾಯಕದ ತತ್ವಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಿಯಾಗಿವೆ. "ವಚನಗಳು ಕೇವಲ ಓದುವುದಕ್ಕಲ್ಲ, ಬದುಕುವುದಕ್ಕೆ" ಎಂದು ಹೇಳಿದ ಅವರು, ಯುವಜನತೆ ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಂಗಳವಾದ್ಯ, ನಂದಿಧ್ವಜ, ವೀರಗಾಸೆ, ಭಜನಾ ತಂಡಗಳು, ಪೂಜಾ ಕುಣಿತ, ಹುಲಿ ಕುಣಿತ, ಗೊರವರ ಕುಣಿತ, ಕಂಸಾಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಸಾಂಸ್ಕೃತಿಕ ವೈಭವವನ್ನು ಮೆರೆದವು. ಅಶ್ವಾರೂಢ ಶ್ರೀ ಬಸವೇಶ್ವರರ ಪ್ರತಿಮೆ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದಲ್ಲಿ ಕಾರಾಪುರ ವಿರಕ್ತಮಠದ ಶ್ರೀ ಬಸವರಾಜಸ್ವಾಮಿ ಒಡೆಯರ್ ಸೇರಿದಂತೆ ವಿವಿಧ ಮಠಾಧೀಶರು ದಿವ್ಯ ಸಾನಿಧ್ಯ ವಹಿಸಿದ್ದರು. ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು,ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಜಿಲ್ಲಾ ಯುವ ಘಟಕ ನಿರ್ದೇಶಕರು ಆನಂದ್ ಹೊನ್ನೂರು, ಬಸವ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಕೆಸ್ತೂರು ಪುಟ್ಟಸುಬ್ಬಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ್, ಯುವ ಘಟಕದ ಅಧ್ಯಕ್ಷ ರುದ್ರೇಶ್ ಗುಂಬಳ್ಳಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಮಲ್ಲಿಗೆಹಳ್ಳಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಾಲ್ಲೂಕಿನ ವಿವಿಧ ಗ್ರಾಮಗಳ ಬಸವೇಶ್ವರ ಸಂಘಗಳ ಪದಾಧಿಕಾರಿಗಳು, ಯುವಕರು ಮತ್ತು ಸಾವಿರಾರು ಭಕ್ತರು ಭಾಗವಹಿಸಿದ್ದರು.

ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು. ಬಸವಣ್ಣನವರ ತತ್ವ-ಸಿದ್ಧಾಂತಗಳ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಿದ್ದ ಈ ಮಹೋತ್ಸವವು ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನೆರವೇರಿತು.

ನಿಮ್ಮ ಧ್ವನಿ ನಮ್ಮ ಸುದ್ದಿ 📢

G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ