ಪತ್ರಿಕೋದ್ಯಮ–ಸಮಾಜ ಸೇವೆಗೆ ಡಾ. ರಾಜೇಶ್ ನಾಯಕ್‌ಗೆ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ
![]() |
ಚಾಮರಾಜನಗರ, ಜು.12: ಪತ್ರಿಕೋದ್ಯಮ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಡಾ. ರಾಜೇಶ್ ನಾಯಕ್ ಅವರಿಗೆ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಬೆಂಗಳೂರು ಗಂಧದ ಗುಡಿ ಕನ್ನಡ ಸಂಘ ಹಾಗೂ ಧಾರವಾಡದ ಚೇತನ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ, ನವಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು (ರಿ), ಬೆಂಗಳೂರು ಸಹಯೋಗದೊಂದಿಗೆ ಭಾನುವಾರ ನೆಲಮಂಗಲದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕನ್ನಡ ನುಡಿ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಭೇರ್ಯ ರಾಮ್ ಕುಮಾರ್ ರವರು ಸಮ್ಮೇಳನ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ. ನಾಡಪ್ರಭು ಕೆಂಪೇಗೌಡರ ಆದರ್ಶಗಳು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದು ಪ್ರಶಸ್ತಿ ಪುರಸ್ಕೃತರು ಇನ್ನಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಗಂಧದ ಗುಡಿ ಕನ್ನಡ ಸಂಘದ ರಾಜ್ಯಾಧ್ಯಕ್ಷ ಡಾ. ಚಂದ್ರಶೇಖರ ಮಾಡಲಗೇರಿ ಅವರು ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಶಾಲು ಹೊದಿಸಿ ಡಾ. ರಾಜೇಶ್ ನಾಯಕ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧನೆಗೈದ ಸಾಧಕರನ್ನು ಸನ್ಮಾನಿಸಿದರು.
ಡಾ. ರಾಜೇಶ್ ನಾಯಕ್ ಅವರು ಪತ್ರಿಕೋದ್ಯಮದ ಮೂಲಕ ಜನಪರ ಸಮಸ್ಯೆಗಳನ್ನು ಬೆಳಕಿಗೆ ತರುವುದು, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಹಾಗೂ ಸಮಾಜಮುಖಿ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಮಾರಂಭದಲ್ಲಿ ಸಾಹಿತಿಗಳು, ಶಿಕ್ಷಕರು, ಪತ್ರಕರ್ತರು, ಸಮಾಜಸೇವಕರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ