ಲಿಂಗೈಕ್ಯ ಎಚ್ ಎಸ್ ಮಹದೇವ ಪ್ರಸಾದ್ ಅವರ 68ನೇ ಜನ್ಮೋತ್ಸವ ಅಂಗವಾಗಿ ದಾಸೋಹ ಮೂಲಕ ಸರಳ ಆಚರಣೆ

ಲಿಂಗೈಕ್ಯ ಎಚ್ ಎಸ್  ಮಹದೇವ ಪ್ರಸಾದ್ ಅವರ 68ನೇ ಜನ್ಮೋತ್ಸವ ಅಂಗವಾಗಿ ದಾಸೋಹ ಮೂಲಕ ಸರಳ ಆಚರಣೆ

ಚಾಮರಾಜನಗರ, ಆ.5: ಲಿಂಗೈಕ್ಯ ಮಾಜಿ ಸಚಿವರು ಹಾಗೂ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಯ ಹರಿಕಾರರಾದ ಶ್ರೀ ಎಚ್ ಎಸ್ ಮಹದೇವ ಪ್ರಸಾದ್ ಅವರ 68ನೇ ಜನ್ಮೋತ್ಸವವನ್ನು ಇಂದು ಚಾಮರಾಜನಗರ ಜಿಲ್ಲಾ ಕೇಂದ್ರದ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಮಹದೇವ ಪ್ರಸಾದ್ ಸ್ಮರಣೆ ಮತ್ತು ಜನ್ಮೋತ್ಸವ ಸಮಿತಿ, ಚಾಮರಾಜನಗರ ಜಿಲ್ಲೆ ವತಿಯಿಂದ ದಾಸೋಹ ಕಾರ್ಯಕ್ರಮದ ಮೂಲಕ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ಶಾಸಕ ಹಾಗೂ ಲಿಂಗೈಕ್ಯ ಎಚ್. ಎಸ್. ಮಹದೇವ ಪ್ರಸಾದ್ ಅವರ ಸುಪುತ್ರ ಶ್ರೀ ಗಣೇಶ್ ಪ್ರಸಾದ್ ಅವರು ಭಾಗವಹಿಸಿ, ತಮ್ಮ ತಂದೆಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ತಂದೆಯವರು ಚಾಮರಾಜನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಕುರಿತು ಅನೇಕ ಕನಸುಗಳನ್ನು ಕಂಡಿದ್ದರು. ಇಂದಿಗೂ ಅವರ ಒಡನಾಡಿಗಳು, ಸ್ನೇಹಿತರು ಹಾಗೂ ಅಧಿಕಾರಿಗಳು ಅವರ ಸೇವೆ ಮತ್ತು ವ್ಯಕ್ತಿತ್ವವನ್ನು ನೆನಪಿಸಿಕೊಂಡು ಮಾತನಾಡುವಾಗ ನನಗೆ ಹೆಮ್ಮೆ ಅನಿಸುತ್ತದೆ. ಅವರು ಇಂದು ಬದುಕಿದ್ದರೆ ಚಾಮರಾಜನಗರ ಜಿಲ್ಲೆ ಇನ್ನಷ್ಟು ಅಭಿವೃದ್ಧಿ ಹೊಂದಿರುತ್ತಿತ್ತು. ಅವರ ಆದರ್ಶಗಳು, ಮೌಲ್ಯಗಳು ಹಾಗೂ ಜನಪರ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವರ ಆಶಯಗಳನ್ನು ಈಡೇರಿಸಲು ಸದಾ ಪ್ರಯತ್ನಿಸುತ್ತೇನೆ. ತಾವೆಲ್ಲರೂ ಅತ್ಯಂತ ಪ್ರೀತಿ, ಗೌರವ ಮತ್ತು ಶ್ರದ್ಧೆಯಿಂದ ಅವರ ಜನ್ಮೋತ್ಸವವನ್ನು ಆಚರಿಸುತ್ತಿರುವುದು ಹಾಗೂ ಮುಂದಿನ ದಿನಗಳಲ್ಲಿ ಸ್ಮರಣಾ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿರುವುದು ಅಭಿನಂದನೀಯ" ಎಂದು ಹೇಳಿದರು.

ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಕೇಂದ್ರ ಸಮಿತಿ ಸದಸ್ಯರು ಹಾಗೂ ಚಾಮರಾಜನಗರ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಎನ್ ರಿಚ್ ಹೆಚ್. ಎಸ್. ಮಹದೇವಸ್ವಾಮಿ ಅವರು ಸಲ್ಲಿಸಿದರು.


ಅವರು ಮಾತನಾಡುತ್ತಾ, "ವ್ಯಕ್ತಿಗಳು ಅಗಲಬಹುದು, ಆದರೆ ಅವರ ಆದರ್ಶಗಳು, ಜನಪರ ಸೇವೆ ಮತ್ತು ಅಭಿವೃದ್ಧಿಯ ಕನಸುಗಳು ಎಂದೆಂದಿಗೂ ಜೀವಂತವಾಗಿರುತ್ತವೆ" ಎಂದು ಹೇಳಿ, ಮಹದೇವ ಪ್ರಸಾದ್ ಅವರ ಜೀವನ, ಹೋರಾಟ, ಸಾಮಾಜಿಕ ನ್ಯಾಯದ ಬದ್ಧತೆ ಹಾಗೂ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಅಪೂರ್ವ ಕೊಡುಗೆಯನ್ನು ಸ್ಮರಿಸಿದರು.

ವಿದ್ಯಾರ್ಥಿ ಜೀವನದಲ್ಲೇ ದಿವಂಗತ ಡಿ. ದೇವರಾಜ ಅರಸು ಅವರ ವಿಚಾರಧಾರೆಗಳಿಂದ ಪ್ರೇರಣೆ ಪಡೆದು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಮಹದೇವ ಪ್ರಸಾದ್ ಅವರು, ಹಿಂದುಳಿದ ವರ್ಗಗಳು, ರೈತರು, ಕಾರ್ಮಿಕರು ಹಾಗೂ ಸಮಾಜದ ಕಟ್ಟಕಡೆಯ ಜನರ ಅಭಿವೃದ್ಧಿಗಾಗಿ ಜೀವನವಿಡೀ ಶ್ರಮಿಸಿದರು ಎಂದು ತಿಳಿಸಿದರು.

ಚಾಮರಾಜನಗರ ಜಿಲ್ಲೆಗೆ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಜಿಲ್ಲಾ ಆಡಳಿತ ಭವನ, ಕೃಷಿ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಅಭಿವೃದ್ಧಿ, ಕಾನೂನು ಕಾಲೇಜು, ಕೈಗಾರಿಕಾ ವಲಯಗಳ ಸ್ಥಾಪನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು, ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಬಲವರ್ಧನೆ ಹಾಗೂ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ರಚನೆ ಸೇರಿದಂತೆ ಅನೇಕ ಮಹತ್ವದ ಯೋಜನೆಗಳನ್ನು ತರುವಲ್ಲಿ ಮಹದೇವ ಪ್ರಸಾದ್ ಅವರ ಕೊಡುಗೆ ಅನನ್ಯವಾಗಿದೆ ಎಂದು ಅವರು ವಿವರಿಸಿದರು.

"ಒಬ್ಬ ವ್ಯಕ್ತಿಯ ಜೀವನದ ಮೌಲ್ಯ ಅವರು ಎಷ್ಟು ವರ್ಷ ಬದುಕಿದರು ಎಂಬುದರಲ್ಲಿ ಇಲ್ಲ; ಸಮಾಜಕ್ಕಾಗಿ ಅವರು ಎಷ್ಟು ಮಹತ್ತರ ಸೇವೆ ಸಲ್ಲಿಸಿದರು ಎಂಬುದರಲ್ಲಿ ಇದೆ" ಎಂದು ಹೇಳಿದ ಮಹದೇವಸ್ವಾಮಿ, ಮಹದೇವ ಪ್ರಸಾದ್ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಶಾಶ್ವತ ಪ್ರೇರಣೆಯಾಗಿವೆ ಎಂದು ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ದೊಡ್ಡರಪೇಟೆ ಗಿರೀಶ್ ಅವರು ಸ್ವಾಗತ ಹಾಗೂ ನಿರೂಪಣೆ ನೆರವೇರಿಸಿದರು. ದಾಸೋಹದ ವ್ಯವಸ್ಥೆಯನ್ನು ಮಹಾಮನೆ ಗ್ರೂಪ್ನ ಮಾಲೀಕರಾದ ಸ್ಟೈಲ್ ಮಂಜಣ್ಣ ಅವರು ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಶ್ರೀ ಮರಿಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಕೆ. ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ, ಮಹೇಶ್ ಎಸ್ ಮಾಲೀಕರಾದ ಮಹೇಶ್ ಕುದರ್, ಕೊಳ್ಳೇಗಾಲ ತಾಲೂಕು ಪಂಚಾಯಿತಿನ ಮಾಜಿ ಅಧ್ಯಕ್ಷರಾದ ಅರ್ಜಿಪುರ ಮುರಳಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಭೋಗಪುರ ನಾಗೇಂದ್ರ, ಮಹಾಸಭೆಯ ಜಿಲ್ಲಾ ನಿರ್ದೇಶಕರುಗಳಾದ ಮೂಡಲುಪುರ ಮಂಜೇಶ್ ಬಿಸಲವಾಡಿ ಉಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಯದ್ ರಫಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಾಗಲವಾಡಿ ಸದಾಶಿವಮೂರ್ತಿ, ಕಾಗಲವಾಡಿ ಬಸವರಾಜು ಕಲ್ಪುರ ಮಂಜಣ್ಣ ಕೋಣನೂರು ಬಸವಣ್ಣ ಚಾಮರಾಜನಗರ ಟೌನ್ ಬಸಪ್ಪ ಮೂಗೂರು ಸುಂದರಪ್ಪ ವೈ ಪಿ ರಾಜೇಂದ್ರ ಪ್ರಸಾದ್ ಸೇರಿದಂತೆವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಿರ್ದೇಶಕರು, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಲಿಂಗೈಕ್ಯ ಎಚ್. ಎಸ್. ಮಹದೇವ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.

ನಿಮ್ಮ ಧ್ವನಿ ನಮ್ಮ ಸುದ್ದಿ 📢

G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ